![](https://static.wixstatic.com/media/82588d_4c500a0243654bfdabe9ebbc0309a760~mv2.jpeg/v1/fill/w_750,h_422,al_c,q_80,enc_auto/82588d_4c500a0243654bfdabe9ebbc0309a760~mv2.jpeg)
ವಿಶ್ವದಾದ್ಯಂತ ಹಲವು ದೇಶಗಳು ತಾಯಂದಿರ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆ ಎಲ್ಲಾ ತಾಯಂದಿರಿಗೆ ಶುಭಾಶಯವನ್ನು ಕೋರಿದರಲ್ಲದೆ ಇದೇ ಸಮಯದಲ್ಲಿ ಅಫ್ಘಾನಿಸ್ತಾನದಲ್ಲಿ ದಾಳಿಗೆ ತುತ್ತಾದವರಿಗಾಗಿ ಮರುಗಿದ ಪೋಪ್ ಫ್ರಾನ್ಸಿಸರು ಕೊಲಂಬಿಯ ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ ಬಿಕ್ಕಟ್ಟನ್ನು ನೆನೆದು ಕಳವಳ ವ್ಯಕ್ತಪಡಿಸಿ, ಎಲ್ಲರಿಗಾಗಿ ಪ್ರಾರ್ಥಿಸುವ ಭರವಸೆಯನ್ನಿತ್ತರು.
ವರದಿ: ಡೆವಿನ್ ವಾಟ್ಕಿನ್ಸ್
ಪ್ರಪಂಚದಾದ್ಯಂತ ಮಕ್ಕಳಾದಿಯಾಗಿ ದೊಡ್ಡವರೆಲ್ಲರೂ ಸೇರಿ ಅಮ್ಮಂದಿರ ದಿನಾಚರಣೆಯನ್ನು ಆಚರಿಸುತ್ತಿರುವಾಗ ಪೋಪ್ ಫ್ರಾನ್ಸಿಸರು ವಿಶ್ವ ಅಮ್ಮಂದಿರ ದಿನದಂದು ಪ್ರಪಂಚದ ಎಲ್ಲಾ ಅಮ್ಮಂದಿರಿಗೆ ದಿನದ ವಿಶೇಷ ಶುಭಾಶಯಗಳನ್ನು ತಿಳಿಸಿದ್ದಾರೆ. “ಪ್ರಪಂಚದ ಎಲ್ಲಾ ತಾಯಿಯರಿಗೆ, ನಮ್ಮನ್ನೆಲ್ಲ ಅಗಲಿ ಹೋದ ತಾಯಿಯರಿಗೂ ಸಹ ಶುಭಾಶಯಗಳನ್ನು ತಿಳಿಸುತ್ತೇವೆ. ಈ ಸಂದರ್ಭದಲ್ಲಿ ಅಮ್ಮಂದಿರೆಲ್ಲರಿಗೂ ಒಂದು ಸುತ್ತಿನ ಚಪ್ಪಾಳೆ.” ಎಂದು ಪೋಪ್ ನುಡಿದಿದ್ದಾರೆ.
ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಉಗ್ರ ದಾಳಿ
ಭಾನುವಾರದ ಪ್ರತ್ಯೇಕ “ರೆಜಿನಾ ಚೇಲಿ” (ಸ್ವರ್ಗದ ರಾಣಿಯೇ ಪ್ರಾರ್ಥನೆ) ಭಾಷಣದಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅಫ್ಘಾನಿಸ್ತಾನದ ಕಾಬೂಲ್ ನಗರದಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಹಾಗೂ ಗಾಯಗೊಂಡವರ ಕುರಿತು ಮರುಕ ವ್ಯಕ್ತಪಡಿಸಿ, ಅವರಿಗಾಗಿ ಪ್ರಾರ್ಥಿಸಿದರು. ಈ ಭಯಾನಕ ಉಗ್ರದಾಳಿಯಲ್ಲಿ 50 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಇವರಲ್ಲಿ ಬಹುತೇಕರು ಶಾಲೆಯಿಂದ ಹೊರಡುತ್ತಿದ್ದ ವಿದ್ಯಾರ್ಥಿಗಳಾಗಿದ್ದಾರೆ. ಇದೊಂದು “ಅಮಾನವೀಯ ಘಟನೆ” ಎಂದ ಪೋಪ್, ಈ ದಾಳಿಯಲ್ಲಿ ಜೀವತೆತ್ತವರಿಗಾಗಿ ವಿಶೇಷವಾಗಿ ಪ್ರಾರ್ಥಿಸಬೇಕು ಎಂದು ಕರೆ ನೀಡಿದರಲ್ಲದೆ “ದೇವರು ಅಫ್ಘಾನಿಸ್ತಾನಕ್ಕೆ ಶಾಂತಿಯನ್ನು ಕರುಣಿಸಲಿ” ಎಂದು ಪ್ರಾರ್ಥಿಸಿದರು.
ಕೊಲಂಬಿಯ ಪ್ರತಿಭಟನೆಗಳು
ಇದೇ ವೇಳೆ ಪೋಪ್ ಫ್ರಾನ್ಸಿಸ್ ಕೊಲಂಬಿಯ ದೇಶದಲ್ಲಿ ನಡೆಯುತ್ತಿರುವ ಸಾಮಾಜಿಕ ಬಿಕ್ಕಟ್ಟು, ಪ್ರತಿಭಟನೆಗಳು ಮತ್ತು ಹಿಂಸಾಚಾರದ ಕುರಿತು ಸಹ ಪ್ರಸ್ತಾಪಿಸಿದರು. ಲ್ಯಾಟಿನ್ ಅಮೇರಿಕ ದೇಶವಾದ ಕೊಲಂಬಿಯದಲ್ಲಿ ಏಪ್ರಿಲ್ 28 ರಂದು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 12 ಕ್ಕೂ ಅಧಿಕ ಜನರು ಮೃತಪಟ್ಟು, ನೂರಾರು ಜನರು ಗಾಯಳುಗಳಾಗಿದ್ದಾರೆ. ಅಲ್ಲಿನ ಸರ್ಕಾರ ನೂತನ ತೆರಿಗೆ ಸುಧಾರಣೆಯನ್ನು ಪರಿಚಯಿಸಿದ ನಂತರ ಪ್ರಾರಂಭವಾದ ಈ ಪ್ರತಿಭಟನೆ ಕೊನೆಗೆ ಹಿಂಸಾಚಾರದಲ್ಲಿ ಕೊನೆಗೊಂಡಿದೆ. ಈ ಹಿಂಸಾಚಾರದ ನಂತರ ಸರ್ಕಾರ ನೂತನ ತೆರಿಗೆ ಸುಧಾರಣೆ ಕಾನೂನನ್ನು ಹಿಂತೆಗೆದುಕೊಂಡಿದೆ.
ಈ ಹಿಂಸಾಚಾರದಲ್ಲಿ ಮೃತಪಟ್ಟವರಿಗಾಗಿ ಸಂತಾಪಗಳನ್ನು ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್ ಎಲ್ಲರೂ ಕೊಲಂಬಿಯ ದೇಶಕ್ಕಾಗಿ ಪ್ರಾರ್ಥಿಸಬೇಕೆಂದು ಕರೆ ನೀಡಿದರು.
ಫಿಬ್ರೊಮ್ಯಾಗ್ಲಿಯ ಖಾಯಿಲೆಯಿಂದ ಬಳಲುತ್ತಿರುವವರು
ಕೊನೆಯದಾಗಿ, ಫಿಬ್ರೋಮ್ಯಾಗ್ಲಿಯ ಖಾಯಿಲೆಯಿಂದ ಬಳಲುತ್ತಿರುವವರನ್ನುದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸರು “ಈ ಸಂದರ್ಭದಲ್ಲಿ ಈ ಖಾಯಿಲೆಯಿಂದ ಬಳಲುತ್ತಿರುವವರ ಜೊತೆಗೆ ನಾನಿದ್ದೇನೆ. ಅನೇಕ ಬಾರಿ ಉಪೇಕ್ಷಿಸಲ್ಪಡುವ ಈ ಖಾಯಿಲೆಯ ಕುರಿತು ಮತ್ತಷ್ಟು ಸಂಶೋಧನೆ ನಡೆಯಲಿ” ಎಂದು ಹೇಳಿದರು. ಫಿಬ್ರೊಮ್ಯಾಗ್ಲಿಯ ಒಂದು ವಿಶಿಷ್ಟ ರೀತಿಯ ಖಾಯಿಲೆಯಾಗಿದ್ದು ಇದ್ದು ರೋಗಿಗಳಿಗೆ ಅತ್ಯಂತ ನೋವುಂಟು ಮಾಡುತ್ತದೆಯಲ್ಲದೆ, ಈ ಖಾಯಿಲೆಯಿಂದ ಬಳಲುತ್ತಿರುವವರು ನಿದ್ರೆ ಮತ್ತು ನೆನಪಿನ ಶಕ್ತಿಯನ್ನು ಸಹ ಕಳೆದುಕೊಳ್ಳುತ್ತಾರೆ.
ಬುಧವಾರ ಮಾರ್ಚ್ 12 ಅನ್ನು ಅಂತರಾಷ್ಟ್ರೀಯ ಫಿಬ್ರೊಮ್ಯಾಗ್ಲಿಯ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ.
Comments