![](https://static.wixstatic.com/media/82588d_8cfa43695f9449c6bf2ff4d17786ad3c~mv2.jpeg/v1/fill/w_750,h_422,al_c,q_80,enc_auto/82588d_8cfa43695f9449c6bf2ff4d17786ad3c~mv2.jpeg)
ದಕ್ಷಿಣ ಇಟಲಿಯ ಫೊಗ್ಗಿಯಾ ಪ್ರಾಂತ್ಯದ ಸ್ಯಾನ್ ಸೆವೆರೊದಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯವಾಗುವಂತೆ ಸ್ಥಳೀಯ ಕಥೋಲಿಕ ದತ್ತಿಗೆ ವಿಶ್ವಗುರು ಫ್ರಾನ್ಸಿಸ್ ಅವರ ಬೆಂಬಲವನ್ನು ಪೇಪಲ್ ಆಲ್ಮೋನರ್ ಕಾರ್ಡಿನಲ್ ಕೊನ್ರಾಡ್ ಕ್ರಜೀವ್ಸ್ಕಿ ನೀಡಿದರು.
ಜಿಯಾನ್ಕಾರ್ಲೊ ಲಾವೆಲ್ಲಾ ಅವರಿಂದ
"ಸಾಲಿಡಾರಿಟಿ ಸ್ಪೆನ್ಟ್ ವೆಲ್ " ಎಂಬುದು "ಡಾನ್ ಫೆಲಿಸ್ ಕ್ಯಾನೆಲ್ಲಿ" ಎಂಪೋರಿಯೊ ಡೆಲ್ಲಾ ಸಾಲಿಡರಿಯೆಟ್ ಕಥೋಲಿಕ ದತ್ತಿಯ ಘೋಷಣೆಯಾಗಿದ್ದು ಇದು ಫೊಗ್ಗಿಯಾ ಪ್ರದೇಶದ ದೊಡ್ಡ ಪಟ್ಟಣವಾದ ಸ್ಯಾನ್ ಸೆವೆರೊದ ಧರ್ಮ ಪ್ರಾಂತ್ಯದ ಕಾರಿಥಾಸ್ನ ಅನುಮೋದನೆಯೊಂದಿಗೆ ಶನಿವಾರ ತೆರೆಯಲ್ಪಟ್ಟಿತು. ಇದರಿಂದ ಸಾಂಕ್ರಾಮಿಕ ರೋಗದಿಂದ ತೊಂದರೆಯಲ್ಲಿರುವ ಎಲ್ಲಾ ಕುಟುಂಬಗಳು ಅಗತ್ಯವಾದ ಸಹಾಯವನ್ನು ಪಡೆಯಲು ಅರ್ಹವಾಗಿವೆ. ಉದ್ಘಾಟನಾ ಸಮಾರಂಭದಲ್ಲಿ ಸ್ಯಾನ್ ಸೆವೆರೊದ ಧರ್ಮಾಧ್ಯಕ್ಷ ಜಿಯೋವಾನಿ ಚೆಚಿನಾಟೊ, Msgr ಫ್ರಾನ್ಸಿಸ್ಕೊ ಸೊಡ್ಡು, ಕಾರಿಥಾಸ್ ಇಟಲಿಯ ನಿರ್ದೇಶಕ, ಫ್ರಾ.ಆಂಡ್ರಿಯಾ ಪುಪಿಲ್ಲಾ, ಸ್ಯಾನ್ ಸೆವೆರೊದ ಕಾರಿಥಾಸ್ ನಿರ್ದೇಶಕಿ; ಮೇಯರ್, ಫ್ರಾನ್ಸೆಸ್ಕೊ ಮಿಗ್ಲಿಯೊ ಮತ್ತು ಸಾಮಾಜಿಕ ನೀತಿಯ ಪುರಸಭೆಯ ಕೌನ್ಸಿಲರ್ ಸಿಮೋನಾ ವೆಂಡಿಟ್ಟಿ ಉಪಸ್ಥಿತರಿದ್ದರು. ಪೇಪಲ್ ಆಲ್ಮೋನರ್ ಕಾರ್ಡಿನಲ್ ಕೊನ್ರಾಡ್ ಕ್ರಜೀವ್ಸ್ಕಿ ರವರು, ವಿಶ್ವಗುರುಗಳ ಶುಭಾಶಯಗಳನ್ನು ಹಂಚಿಕೊಳ್ಳಲು ಮತ್ತು ಹಾಜರಿದ್ದ ಎಲ್ಲರ ಸಂತೋಷಕ್ಕೆ ಕಾರಣವಾದ ನಿಯೋಜನೆಗೆ ಬೆಂಬಲವನ್ನು ನೀಡಲು ವೈಯಕ್ತಿಕ ಭೇಟಿ ನೀಡಿ ಗುಂಪನ್ನು ಅಚ್ಚರಿಗೊಳಿಸಿದರು.
ಚರ್ಚ್ ಆಫ್ ಸ್ಯಾನ್ ಸೆವೆರೊ ತನ್ನ ಊರಿನ ಪ್ರೇಷಿ ತ ಮತ್ತು ಬಡವರ ಸ್ನೇಹಿತ ಡಾನ್ ಫೆಲಿಸ್ ಕ್ಯಾನೆಲ್ಲಿಯವರ ಸಂಭ್ರಮವನ್ನು ಕೊಂಡಾಡುತ್ತಿದೆ. ಅವರನ್ನು ಇತ್ತೀಚೆಗೆ ಪವಿತ್ರ ಪೀಠವು ಪೂಜ್ಯರೆಂದು ಘೋಷಿಸಿತ್ತು. ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ಪ್ರಸ್ತುತ ಕಷ್ಟಕರ ಸನ್ನಿವೇಶದಲ್ಲಿ, ಎಂಪೋರಿಯಂ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳಿಂದ ಬಳಲುತ್ತಿರುವ ಕುಟುಂಬಗಳ ಕಷ್ಟಗಳನ್ನು ಕೇಳಲು, ಅವರ ಬಗ್ಗೆ ಕಾಳಜಿವಹಿಸಲು, ಅವರಿಗೆ ಬೇಕಾದ ನೆರವು ನೀಡಲು ಮತ್ತು ಅವರಿಗೆ ಉತ್ತಮ ಜೊತೆಯಾಗಬಲ್ಲ ಒಂದು ಸ್ಥಳವಾಗಿದೆ. ವಾರ್ಷಿಕ ತೆರಿಗೆ ರಿಟರ್ನ್ಸ್ ಮೂಲಕ ಇಟಲಿಯನ್ನರು ನೀಡುವ ದೇಣಿಗೆಗಳಿಂದ ಮತ್ತು ಕಾರಿಥಾಸ್ ಇಟಲಿ ನೀಡಿದ ಕೊಡುಗೆಯಿಂದ ಇದು ಚಾಲನೆಗೆ ಬಂದಿತು.
ಅತ್ಯಂತ ಕಡಿಮೆ ಅಥವಾ ಸಮರ್ಪಕವಾದ ಆದಾಯವಿಲ್ಲದ ಕುಟುಂಬಗಳ ಮೂಲಭೂತ ಅಗತ್ಯಗಳಿಗೆ ಸದೃಢವಾದ ಮತ್ತು ತಕ್ಷಣದ ಸಹಾಯವನ್ನು ನೀಡಲು ಇದು ಒಂದು ಹೊಸ ಮಾರ್ಗವಾಗಿದೆ. ಫಲಾನುಭವಿಗಳಿಗೆ ತಮ್ಮ ತಮ್ಮ ಅಗತ್ಯಗಳಿಗೆ ಅನುಗುಣವಾಗಿ, ವಿವಿಧ ಮೂಲಭೂತ ಅವಶ್ಯಕತೆಗಳನ್ನು, ದೇಣಿಗೆ ಅಥವಾ ಖರೀದಿಗಳಿಂದ ಲಭ್ಯವಾಗುವಂತೆ ಅನುವು ಮಾಡಲಾಗಿದೆ. ಈ ಸೇವೆಯನ್ನು ಪಡೆಯಲು ಅರ್ಹರಾಗುವುದಕ್ಕೆ ಅಗತ್ಯ ಮೌಲ್ಯಾಧಾರಿತ ಮಾಪನದ ನಂತರ ಕಾರಿಥಾಸ್ ಧರ್ಮಪ್ರಾಂತ್ಯದ ಕೇಂದ್ರವು ಸಕ್ರಿಯಗೊಳಿಸಿದ ತಾತ್ಕಾಲಿಕ ಪಾಯಿಂಟ್ ಕಾರ್ಡ್ ಒಂದನ್ನು ನೀಡುತ್ತದೆ. ಇದರ ಸಹಾಯದಿಂದ ಉಚಿತವಾಗಿ ಶಾಪಿಂಗ್ ಮಾಡಲು ಸಹ ಸಾಧ್ಯವಿದೆ. ಫಲಾನುಭವಿಗಳಿಗೆ ಅನೇಕ ಸೇವೆಗಳು, ಬೆಂಬಲ ಮತ್ತು ತರಬೇತಿಯನ್ನು ಸಹ ನೀಡಲಾಗುವುದು. ಅಲ್ಲದೆ, ಹೆಚ್ಚುವರಿ ಆಹಾರವನ್ನು ಮರುಪಡೆಯಲು ಮತ್ತು ಮರುಹಂಚಿಕೆ ಮಾಡುವ ಉದ್ದೇಶದಿಂದ ಆ ಪ್ರದೇಶದ ಕಂಪನಿಗಳು ಉತ್ತಮ ವ್ಯವಹಾರಗಳ ಜಾಲವನ್ನು ನಿರ್ಮಿಸಿ ಈ ಯೋಜನೆಗೆ ತಮ್ಮ ಬೆಂಬಲ ಸೂಚಿಸಿವೆ.
ಈ ಎಂಪೋರಿಯಂ ನಾಗರಿಕರಿಗೆ ಅಗತ್ಯವಾಗಿ ಬೇಕಾಗುವ ಬೆಂಬಲ ಜಾಲವನ್ನು ನಿರ್ಮಿಸಲು, ಅವರ ಘನತೆಯನ್ನು ಪುನಃಸ್ಥಾಪಿಸಲು ಮತ್ತು ಆಹಾರ ತ್ಯಾಜ್ಯದ ವಿರುದ್ಧದ ಹೋರಾಟವನ್ನು ಉತ್ತೇಜಿಸಲು ಧರ್ಮಸಭೆಯ ಕಾರಿಥಾಸ್ ಸಂಸ್ಥೆಗಳು, ಸಾಮಾಜಿಕ ಸೇವ ಸಂಸ್ಥೆಗಳು, ಸಂಘಗಳು, ಮೂರನೇ ವಲಯ ಮತ್ತು ಸ್ವಯಂಸೇವಕರ ನಡುವೆ ಮುಖಾಮುಖಿಯ ಮಾಧ್ಯಮವಾಗಿದೆ. ಚರ್ಚೆ ಮತ್ತು ಚಿಂತನೆಯ ವೇದಿಕೆಯಾಗಿದೆ. ನಗರಕ್ಕಾಗಿ ಅನೇಕ ವಿಶೇಷ ಯೋಜನೆಗಳ ಮೂಲಕ ಸಂಸ್ಥೆಗಳು ಮತ್ತು ಸಂಘಗಳು ಹಲವಾರು ವರ್ಷಗಳಿಂದ ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿರುವ ಚಟುವಟಿಕೆಗಳ ಸರಪಳಿಯಲ್ಲಿ ಎಂಪೋರಿಯಂನ ಪ್ರಾರಂಭವು ಕೇವಲ ಒಂದು ಭಾಗವಷ್ಟೇ.
13 ಜೂನ್ 2021, 13: 24
ಕನ್ನಡಕ್ಕೆ: ಮೇರಿ ಲತಾ
Comentários